ಹೌದು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶಗಳು ಎಂದರೇ ಸಾಕು ಪ್ರವಾಸಿ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳಗಳು. ಇನ್ನೂ ಈ ಸ್ಥಳಗಳಲ್ಲಿ ಐತಿಹಾಸಿಕವಾಗಿಯೂ ಸಹ ಸಾಕಷ್ಟು ಸ್ಥಳಗಳು ದಟ್ಟ ಕಾಡುಗಳಲ್ಲಿ ಹಾಗೂ ನದಿಯ ದಂಡೆಯಲ್ಲಿ ಬರುತ್ತವೆ. ಇಂತಹವುಗಳಲ್ಲಿ ಅತೀ ಪ್ರಮುಖ ವಾಗಿರುವುದು ಇದೇ ನೋಡ್ರಿ ಸಹಸ್ರ ಲಿಂಗ ಸ್ಥಳ. ಅಷ್ಟಕ್ಕೂ ಈ ಸ್ಥಳ ಬರೋದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯಿಂದ ಯಲ್ಲಾಪುರಕ್ಕೆ ಸಂಚಾರ ಮಾಡುವಾಗ 17 ಕಿಲೋಮೀಟರ್ ಅಂತರದಲ್ಲಿ ಬರುತ್ತಿದ್ದು, ಧಾರವಾಡ ಜಿಲ್ಲೆಯಲ್ಲಿ ಹುಟ್ಟಿ ಬರುವ ಶಾಲ್ಮಾಲ ನದಿಯ ಮದ್ಯ ಭಾಗದಲ್ಲಿ ಅಂದಾಜು ನದಿಯಲ್ಲಿರುವ ಬಂಡೆಗಳಲ್ಲೇ ಕೆತ್ತಿರುವ 4 ಕಿಲೋಮೀಟರ್ ಗಟ್ಟಲೇ ಲಿಂಗಗಳು ಹಾಗೂ ನಂದಿ ವಿಗ್ರಹಗಳ ಸ್ಥಳಗಳನ್ನು ನೋಡುವುದೇ ತುಂಬಾ ಅವಿಸ್ಮರಣೀಯ. ಅಷ್ಟಕ್ಕೂ ದಟ್ಟ ಅರಣ್ಯದಲ್ಲಿ ಬರುವ ಶಾಲ್ಮಲಾ ನದಿಯ ಮದ್ಯ ಭಾಗದಲ್ಲಿ ಈ ಸಹಸ್ರಲಿಂಗಗಳ ಪುರಾತನವಾಗಿ ಇತಿಹಾಸ ಮಹಾಭಾರತದ ಕಾಲದಲ್ಲೂ ಸಹ ಈ ಸ್ಥಳ ಪ್ರಮುಖವಾಗಿತ್ತು ಎನ್ನುತ್ತವೆ ಪುರಾತನ ಕಥೆಗಳು. ಇನ್ನೂ ಇಲ್ಲಿ ವಿಜಯ ನಗರದ ಅರಸರು ಸಹ ಬಂದು ಇಲ್ಲಿ ಮಹಾ ಶಿವರಾತ್ರಿಯಂದು ಇಲ್ಲಿ ಪೂಜೆ ಪುರಸ್ಕಾರ ಮಾಡುತ್ತಿದ್ದರು ಎಂಬ ಪ್ರತಿತಿಗಳು ಇವೆ. ಇನ್ನೂ ವಾಸ್ತವಾಂಶಕ್ಕೆ ಹತ್ತಿರವಾಗಿರುವ ಇತಿಹಾಸ ದಾಖಲೆಗಳ ಪ್ರಕಾರ ಈ ಭಾಗದ ಶಿರಸಿ ಪ್ರದೇಶವನ್ನು 1678 ರಿಂದ 1718 ಇಸವಿಯ ನಡುವೆ ಸದಾಶಿವರಾಯ ಎಂಬ ಅರಸ ಆಳ್ವಿಕೆ ನಡೆಸುತ್ತಿದ್ದನು. ಈ ಸಂದರ್ಭದಲ್ಲಿ ಅವನಿಗೆ ಮಕ್ಕಳು ಆಗದೇ ಇದ್ದಾಗ ಸಾಧುಗಳ ಅಣತಿಯಂತೆ ಇಲ್ಲಿರುವ ಬಂಡೆಗಳಲ್ಲಿ ಮಹಾ ಶಿವರಾತ್ರಿಯಂದು ಒಂದೇ ದಿವಸ ಶಿಲ್ಪಿಗಳ ಕೈಯಲ್ಲಿ ಸಹಸ್ರ ಲಿಂಗಗಳನ್ನು ಕೆತ್ತಿಸಿ ಹೋಮ ಮಾಡಿಸಿ ಉಪವಾಸ ಮಾಡಿದ್ದನು. ಮರು ವರ್ಷವೇ ಈ ಅರಸನಿಗೆ ಮಕ್ಕಳು ಆದವು ಎನ್ನುವ ಪ್ರತಿತಿಗಳು ಇದ್ದು. ಇನ್ನೂ ಇಲ್ಲಿರುವ ಲಿಂಗಗಳಿಗೆ ಸರ್ಪಗಳು ಸುತ್ತಿಕೊಂಡು ಎಡೆ ಎತ್ತಿ ದರ್ಶನ ಮಾಡುತ್ತವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಇವರ ಸವಿ ನೆನಪಿಗಾಗಿ ಇಂದಿಗೂ ಸಹ ಪ್ರತಿ ವರ್ಷ ಮಹಾ ಶಿವರಾತ್ರಿಯಂದು ಸುಮಾರು 4 ಜಿಲ್ಲೆಗಳಿಂದ ಭಕ್ತರು ಬಂದು ಈ ನದಿಯಲ್ಲಿ ಸ್ನಾನ ಮಾಡಿ ಇಲ್ಲಿರುವ ಲಿಂಗಗಳಿಗೆ ಪೂಜೆ ಮಾಡಿ ಉಪ ವಾಸ ಮಾಡುತ್ತಾರೆ. ವಿಶೇಷ ಎಂದರೇ ಮಹಾಶಿವರಾತ್ರಿಯಂದು ಇಲ್ಲಿ ಭಕ್ತರು, ಸಾಧುಗಳು ಹೆಚ್ಚಾಗಿ ಇದೇ ಪ್ರದೇಶದಲ್ಲೇ ತಪಸ್ಸು ಮಾಡುತ್ತಾರೆ. ಆದ್ರೇ ವಿಪರ್ಯಾಸ ಎಂದರೇ ಸಹಸ್ರಲಿಂಗ ನದಿಯ ಕೊರೆತಕ್ಕೆ ದಿನೇ ದಿನೇ ನಶಿಸಿ ಹೋಗುತ್ತಿದ್ದು, ಇಲ್ಲಿರುವ ಪ್ರಾಚೀನ ಸ್ಮಾರಕಗಳು, ಶಾಸನಗಳು ಸಹ ತುಂಬಾ ದುಸ್ಥಿತಿಯಲ್ಲಿವೆ. ಸ್ಥಳೀಯ ಬೈರಂಭೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಪ್ರವಾಸಿ ಹಾಗೂ ಐತಿಹಾಸಿಕ ತಾಣಕ್ಕೆ ಇನ್ನೂ ಹೆಚ್ಚಿನ ಮನ್ನಣೆ ಮತ್ತು ಮಹತ್ವ ಪ್ರವಾಸೋದ್ಯಮ ಹಾಗೂ ಪ್ರಾಚ್ಯವಸ್ತು ಇಲಾಖೆಗಳು ಕಾಯಕಲ್ಪ ಕೊಡುವ ಕೆಲಸ ಮಾಡಬೇಕಾಗಿದೆ. ಒಟ್ಟಾರೆ ಈ ಐತಿಹಾಸಿಕ ತಾಣಕ್ಕೆ ಇನ್ನೂ ಹೆಚ್ಚಿನ ಕಾಯಕಲ್ಪ ಹಾಗೂ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಇನ್ನಾದ್ರೂ ಸರ್ಕಾರ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತ ಒಡಗಿಸುವುದೇ ಎಂಬುದನ್ನು ಕಾದುನೋಡಬೇಕಿದೆ