ಪಡಿತರ ಅಕ್ಕಿ ಮಾರಾಟ ಮಾಡುವವರ ಹಾಗೂ ಖರೀದಿ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ- ಎಸಿ ಹರಪನಹಳ್ಳಿ
ಪಡಿತರ ಅಕ್ಕಿ ಮಾರಾಟ ಮಾಡುವವರ ಹಾಗೂ ಖರೀದಿ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ- ಎಸಿ ಹರಪನಹಳ್ಳಿ
ಹರಪನಹಳ್ಳಿ ಸಹಾಯಕ ಆಯುಕ್ತರ ಕಾರ್ಯಾಲಯದಲ್ಲಿ ದಿನಾಂಕ 03.04.2025 ರಂದು ಮಾನ್ಯ ಸಹಾಯಕ ಆಯುಕ್ತರಾದ ಚಿದಾನಂದ ಗುರುಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಉಪವಿಭಾಗದ ಎಲ್ಲಾ ತಾಲ್ಲೂಕುಗಳ ಆಹಾರ ಇಲಾಖೆ ಶಿರಸ್ತೇದಾರ್ ಹಾಗೂ ಅಹಾರ ನಿರೀಕ್ಷಕರೊಂದಗೆ ಸಭೆ ನಡೆಸಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ ಫಲಾನುಭವಿಗಳಿಗೆ ನಗದು ಬದಲು ಇನ್ನು ಮುಂದೆ ಅಕ್ಕಿ ವಿತರಿಸಲಾಗುತ್ತಿದ್ದು, ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವವರ ಹಾಗೂ ಖರೀದಿ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಸರ್ಕಾರ ಉಚಿತವಾಗಿ ನೀಡುತ್ತಿರುವ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ವಿತರಣೆ ಆರಂಭಿಸುತ್ತಿದ್ದಂತೆ ಖರೀದಿದಾರರೇ ನೇರವಾಗಿ ಮನೆಬಾಗಿಲಿಗೆ ಹೋಗಿ ಅಕ್ಕಿ ಖರೀದಿ ಮಾಡುವ ಬಗ್ಗೆ ದೂರುಗಳು ಬರುತ್ತಿದ್ದು, ಮಾಹಿತಿ ಬರುವ ಕಡೆಗಳಲ್ಲಿ ದಾಳಿ ಮಾಡಿ ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಪ್ರಕರಣ ದಾಖಲಿಸುವಂತೆ ಹಾಗೂ ಪಡಿತರ ಚೀಟಿದಾರರು ಅಕ್ಕಿಯನ್ನು ಮಾರಾಟ ಮಾಡಿದ್ದಲ್ಲಿ ಪಡಿತರ ಚೀಟಿಯನ್ನು ರದ್ದ ಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರು ಅಕ್ರಮ ಅಕ್ಕಿ ಮಾರಾಟ ಮಾಡುವುದು ಕಂಡು ಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ತಿಳಿಸಿದರು. ಸಭೆಯಲ್ಲಿ ಹರಪನಹಳ್ಳಿ,ಹಡಗಲಿ ಹಾಗೂ ಕೊಟ್ಟೂರು ತಾಲ್ಲೂಕಿನ ಆಹಾರ ಶಿರಸ್ತೇದಾರ್ ಭರತ ರಾಥೋಡ್,ನಾಗೇಂದ್ರನಾಯ್ಕ,ಮಂಜುನಾಥ ಹಾಗೂ ಕಚೇರಿ ಸಿಬ್ಬಂದಿ ಹಾಜರಿದ್ದರು.